ರಾಮಚಂದ್ರ 1271 - 1312. ಸೇವುಣವಂಶದ ಕೊನೆಯ ದೊರೆ. ಕನ್ನರನ ಮಗ. ತನ್ನ ಚಿಕ್ಕಪ್ಪನ ಮಗ ಅಮಣ ಪಟ್ಟಕ್ಕೆ ಬಂದ ಬಳಿಕ ಅವನನ್ನು ಸೋಲಿಸಿ ತಾನೇ ರಾಜನಾದ. ಪಟ್ಟಕ್ಕೆ ಬರುತ್ತಿದ್ದಂತೆಯೇ ಮಾಳವ ಮತ್ತು ಗುಜರಾತುಗಳ ಕಡೆಗೆ ದಂಡೆತ್ತಿ ಹೋಗಿ ಮಾಳವರಾಜ ಅರ್ಜುನವರ್ಮನನ್ನು ಸೋಲಿಸಿ ಅಲ್ಲಿಂದ ಮುಂದೆ ನುಗ್ಗಿ ವಾಘೇಲ ರಾಜ ಅರ್ಜುನನನ್ನೂ ಪರಾಭವಗೊಳಿಸಿದ. ಈ ಎರಡೂ ವಿಜಯಗಳು 1272 ಕ್ಕಿಂತ ಮುಂಚೆ ಸಾಧಿತವಾದುವು. ಅನಂತರ ಈತ ಹೊಯ್ಸಳರತ್ತ ತಿರುಗಿದ. ಕದಂಬ ಕಾಮದೇವನಿಗೆ ಸಹಾಯ ಮಾಡುವ ನೆಪದಿಂದ ರಾಮಚಂದ್ರನ ಸೇನಾಧಿಪತಿ ಸಾಳುವ ತಿಕ್ಕಮ ಹೊಯ್ಸಳರ ಮೇಲೆ ಯುದ್ಧ ಮಾಡಿದ. ಅವನು 1276ರಲ್ಲಿ ಸಾಂತರ ಬೊಮ್ಮರಸನ ಮೇಲೆ ಯುದ್ಧಮಾಡಿ ಸೋಲಿಸಿದ. ಅನಂತರ ತಿಕ್ಕಮ ಗುತ್ತವೊಳಲಿನ ಮೂರನೆಯ ಗುತ್ತನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು, ಇರುಂಗೊಳ, ಹರಿಪಾಲ, ಜೋಯಿದೇವ, ಇಮ್ಮಡಿ ಬಲ್ಲಹದೇವ ಮುಂತಾದ ಮಾಂಡಲೀಕರ ಸೈನ್ಯ ಸಹಾಯದೊಡನೆ ಬೆಳವಾಡಿಗೆ ಮುತ್ತಿಗೆ ಹಾಕಿದ. ಆಗ ಹೊಯ್ಸಳ ಸೈನ್ಯ ಚಿಕ್ಕಕೇತಯ್ಯನಾಯಕನ ಮುಂದಾಳುತ್ವದಲ್ಲಿ ಧೈರ್ಯದಿಂದ ಕಾದಾಡಿ ಸೇವುಣ ಸೈನ್ಯವನ್ನು ದುಮ್ಮೆಯವರೆಗೆ ಓಡಿಸಿತು. ರಾಮಚಂದ್ರ ಕಾಕತೀಯ ರಾಣಿ ರುದ್ರಮ ದೇವಿಯರೊಡನೆ ಯುದ್ಧಮಾಡಿದ. ಇದರಲ್ಲಿಯೂ ಇವನು ಜಯಶಾಲಿಯಾಗಲಿಲ್ಲ. ಕಾಕತೀಯರು ರಾಯಚೂರಿನ ಹಾಲುವೆ ಮತ್ತು ಮಾನುವೆ ಕೋಟೆಗಳನ್ನು ಅಕ್ರಮಿಸಿದರು.

ಹೀಗೆ ರಾಮಚಂದ್ರ ಸತತವಾಗಿ ಯುದ್ಧನಿರತನಾಗಿದ್ದಾಗ ಸೇವುಣರಿಗೆ ದೊಡ್ಡ ವಿಪತ್ತು ಬಂದೊದಗಿತು. ದೆಹಲಿಯ ಸುಲ್ತಾನ ಅಲಾ ಉದ್ದೀನನ ಸೈನ್ಯ ದೇವಗಿರಿಯನ್ನು ಮುತ್ತಿತು (1296). ರಾಮಚಂದ್ರ ಅಸಹಾಯಕತೆಯಿಂದ ಕೋಟೆಯೊಳಗೆ ಸೇರಿಕೊಂಡ. ಆದರೆ ಅಹಾರ ಪದಾರ್ಥಗಳು ಮುಗಿದು ಹೋದುದರಿಂದ ಮತ್ತು ಅಲಾ ಉದ್ದೀನ್ ತನ್ನ ಭಾರಿ ಸೈನ್ಯ ಹಿಂದೆ ಬರುತ್ತಿದೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರಿಂದ, ರಾಮಚಂದ್ರ ಸಂಧಿಯನ್ನು ಮಾಡಿಕೊಂಡ. ಅನಂತರ ಏನಾಯಿತೆಂದು ತಿಳಿಯುವುದು ಕಷ್ಟ. ಏಕೆಂದರೆ ಮಹಮ್ಮದೀಯ ಇತಿಹಾಸಕಾರರ ಬರೆವಣಿಗೆಯಲ್ಲಿ ಒಮ್ಮತವಿಲ್ಲ. ಫೆರಿಸ್ತನ ಪ್ರಕಾರ ರಾಮಚಂದ್ರನ ಮಗ ಸಿಂಘಣ ರಾಜಧಾನಿಗೆ ಹಿಂದಿರುಗಿ, ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಅಲಾ ಉದ್ದೀನನಿಗೆ ``ನಿನಗೆ ನಿನ್ನ ಪ್ರಾಣದ ಮೇಲೆ ಆಸೆಯಿದ್ದರೆ, ನೀನು ಲೂಟಿ ಮಾಡಿರುವುದನ್ನೆಲ್ಲ ಹಿಂದಿರುಗಿಸಿ, ತಪ್ಪಿಸಿಕೊಂಡು ಓಡಿಹೋಗುವುದು ನಿನ್ನ ಅದೃಷ್ಟವೆಂದು ಭಾವಿಸು``. ಎಂದು ಪತ್ರ ಬರೆದ. ಇದರಿಂದ ಕೋಪಗೊಂಡ ಅಲಾಉದ್ದೀನ್ ಮತ್ತೊಮ್ಮೆ ಯುದ್ಧಮಾಡಿ ಸಿಂಘಣನನ್ನು ಸೋಲಿಸಿ, ಕಪ್ಪಕಾಣಿಕೆಗಳ ಮೊತ್ತವನ್ನು ಹೆಚ್ಚಿಸಿದ. ಸಿಂಘಣ ಓಡಿಹೋದ.

ರಾಮಚಂದ್ರ 1303ರಲ್ಲಿ ಮತ್ತೊಮ್ಮೆ ಹೊಯ್ಸಳರ ಮೇಲೆ ಹೊಳಲ್ಕೆರೆಯಲ್ಲಿ ಯುದ್ಧ ಮಾಡಿದ. ಇದರಲ್ಲಿಯೂ ಈತ ಪರಾಜಿತನಾದ. ಅಲ್ಲದೆ, ಈತ ಅಲ್ಲಾವುದ್ದೀನನಿಗೆ ಕೊಡಬೇಕಾಗಿದ್ದ ಕಪ್ಪವನ್ನು ನಿಲ್ಲಿಸಿದ್ದರಿಂದ. ಕೋಪಗೊಂಡ ಸುಲ್ತಾನ ಮಲ್ಲಿಕ್ ಕಾಫರ್‍ನನ್ನು ದೇವಗಿರಿಗೆ ಕಳುಹಿಸಿದ. ರಾಮಚಂದ್ರ ಮತ್ತೊಮ್ಮೆ ಸೋತ. ಮಲ್ಲಿಕ್ ಕಾಫರ್ ಇವನನ್ನು ದೆಹಲಿಗೆ ಒಯ್ದ. ಆರು ತಿಂಗಳ ಕಾಲ ಅಲಾ ಉದ್ದೀನನ ಅತಿಥಿಯಾಗಿದ್ದ ರಾಮಚಂದ್ರ ಹಲವು ಮರ್ಯಾದೆಗಳೊಡನೆ ದೇವಗಿರಿಗೆ ಹಿಂದಿರುಗಿ ತನ್ನ ಮರಣಪರ್ಯಂತ ಸುಲ್ತಾನನಿಗೆ ವಿಧೇಯನಾಗಿ ನಡೆದುಕೊಂಡ. ಅಲಾ ಉದ್ದೀನನ ಸೈನ್ಯ ಓರಂಗಲ್ಲಿಗೆ ಹೋಗುವ ಮಾರ್ಗದಲ್ಲಿ ದೇವಗಿರಿಯಲ್ಲಿ ತಂಗಿದ್ದಾಗ (1309) ರಾಮಚಂದ್ರ ಅದಕ್ಕೆ ಸಹಾಯ ಮಾಡಿದ. ಈತ 1312ರಲ್ಲಿ ಮೃತನಾದ.

ರಾಮಚಂದ್ರ ಸೇವುಣ ವಂಶದ ಕೊನೆಯ ಸಮರ್ಥ ದೊರೆ. ವಿಶಾಲವಾದ ರಾಜ್ಯಕ್ಕೆ ಒಡೆಯನಾಗಿದ್ದ. ಆದರೆ ಈತ ಉತ್ತರದಿಂದ ಒತ್ತಿಬರುತ್ತಿದ್ದ ಇಸ್ಲಾಮೀ ಬಲವನ್ನು ತಡೆಯುವ ಪ್ರಯತ್ನಗಳನ್ನು ಮಾಡದೆ, ತನ್ನ ಸುತ್ತ ಮುತ್ತಿನವರೊಡನೆ ಯುದ್ಧದಲ್ಲಿ ನಿರತನಾಗಿ ಕೊನೆಗೆ ತಾನೇ ಇಸ್ಮಾಮಿಯ ತನ್ನ ಶಕ್ತಿಗೆ ಬಲಿಯಾದ. ಇವನ ಅನಂತರ ಇವನು ಮಕ್ಕಳಲ್ಲಿ ಒಬ್ಬನಾದ ಸಿಂಘಣ ದೇವಗಿರಿಯ ರಾಜನಾದ. ರಾಮಚಂದ್ರ ಮರಾಠಿ ಸಾಹಿತ್ಯದ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ಕೊಟ್ಟ. ಮಹಾನುಭಾವ ಪಂಥದ ಅನೇಕ ಗ್ರಂಥಗಳು ಇವನ ಆಸ್ಥಾನದಲ್ಲಿ ರಚಿತವಾದವು.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ